ತಿಟ್ಟೆ ಕೃಷ್ಣಯ್ಯಂಗಾರ್ಯರು
(1902-1997) ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದ ತಿಟ್ಟೆ ನಾರಾಯಣ ಅಯ್ಯಂಗಾರ್ಯರ ಪುತ್ರರು, ಜನನ ಕರ್ನಾಟಕದ ಮೈಸೂರಿನಲ್ಲಿ, (24-0-1902). ಕೃಷ್ಣಅಯ್ಯಂಗಾರ್ ಅಥವ ತಿಟ್ಟೆ ಕೃಷ್ಣಅಯ್ಯಂಗಾರ್. ಇವರ ಮನೆತನಕ್ಕೆ ಸಂಗೀತ ಪರಂಪರಾನುಗತವಾಗಿ ಒಲಿದಿದೆ. ಅಜ್ಜ ತಿಟ್ಟೆ ರಂಗಾಚಾರ್ಯರು ಕೂಡ ಮೈಸೂರು ಸಂಸ್ಥಾನದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದರು. ಸಂಗೀತ ರಸಿಕರಿಗೆ, ಕಲಾವಿದರಾಗಿ ಸಂಗೀತ ಕಾಶಿ ಎನಿಸುವಂತಿರುವ ಸದ್ಗುರು ತ್ಯಾಗರಾಜರ ವಾಸಸ್ಥಾನವಾದ ತಿರುವಯ್ಯಾರಿಗೆ ಸಮೀಪದ ಒಂದು ಗ್ರಾಮ-ತಿಟ್ಟೆ. ರಂಗಾಚಾರ್ಯರು ತಮ್ಮ ಕಾಲದಲ್ಲೇ ತಮಿಳುನಾಡಿನ ತಂಜಾವೂರು ಜಿಲ್ಲೆಯ ಪುಟ್ಟ ಗ್ರಾಮ ತಿಟ್ಟೆಯಿಂದ ಮೈಸೂರಿಗೆ ಬಂದು ಆಸ್ಥಾನ ವಿದ್ವಾಂಸರಾದವರು. ಅಪ್ಪ, ಮಗ, ಮೊಮ್ಮಗ ಮೂರು ತಲೆಮಾರಿನವರೂ ಸಂಗೀತ ಕಲಾವಿದರಾಗಿದ್ದು ಸಂಗೀತ ಶಾರದೆಯ ಅನವರತ ಸೇವೆಯಿಂದ ತಮ್ಮ ಹುಟ್ಟಿದೂರಿಗೆ ಸಂಗೀತ ಕ್ಷೇತ್ರದಲ್ಲೇ ಒಂದು ವಿಶೇಷ ಪ್ರಸಿದ್ಧಿಯನ್ನು ಗಳಿಸಿಕೊಟ್ಟಿದ್ದರು. ತಿಲ್ಲೈ ಸ್ಥಾನಂ ರಾಮ ಅಯ್ಯಂಗಾರ್ಯರು ತ್ಯಾಗರಾಜರ ನೇರ ಶಿಷ್ಯರು, ಗುರುಗಳ ನಾದಾಮೃತವನ್ನು ಭಕ್ತಿಯಿಂದ ಸವಿದವರು. ರಂಗಾಚಾರ್ಯರು ರಾಮ ಅಯ್ಯಂಗಾರ್ಯರ ಶಿಷ್ಯರು. ರಂಗಾಚಾರ್ಯರು, ಮಗ ನಾರಾಯಣರಿಗೆ ತಾವು ಕಲಿತ ವಿದ್ಯೆಯನ್ನು ಸಂಪೂರ್ಣವಾಗಿ ಧಾರೆ ಎರೆದರು. ಕೃಷ್ಣಯ್ಯಂಗಾರ್ಯರಿಗೂ ಪ್ರಥಮ ಗುರು ತಂದೆ ನಾರಾಯಣಯ್ಯಂಗಾರ್ಯರೇ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ರಂಗಾಚಾರ್ಯರು ಕೃಷ್ಣರಾಜ ಒಡೆಯರ ಕಾಲದಲ್ಲಿ ನಾರಾಯಣ ಅಯ್ಯಂಗಾರ್ಯರು ಅನಂತರ ಕೃಷ್ಣಯ್ಯಂಗಾರ್ಯರು ಹೀಗೆ ಮೂರು ತಲೆಮಾರಿನ ಕಲಾವಿದರೂ ಮೈಸೂರು ಸಂಸ್ಥಾನದ ಆಸ್ಥಾನ ಕಲಾವಿದರಾಗಿದ್ದರು. ಬಾಲ್ಯದಿಂದಲೂ ಸಂಗೀತ ಪರಿಸರದಲ್ಲೇ ಬೆಳೆದ ಕೃಷ್ಣಯ್ಯಂಗಾರ್ಯರು ತಮ್ಮ ಹಿರಿಯರು ನಡೆದ ಹಾದಿಯನ್ನೇ ಅನುಸರಿಸಿ ಸಂಗೀತ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಸಂಸ್ಥಾನದ ದಿಗ್ಗಜರೆನಿಸಿದ್ದ ವೀಣೆಶೇಷಣ್ಣ ಸುಬ್ಬಣ್ಣ ಹಾಗೂ ಬೀಡಾರಂ ಕೃಷ್ಣಪ್ಪನವರ ಮಾರ್ಗದರ್ಶನದಲ್ಲಿ ಎಳೆಯತನದಲ್ಲೇ ಅಪಾರ ಸ್ವರ ಜ್ಞಾನ ಪಡೆದಿದ್ದ ಅಯ್ಯಂಗಾರ್ಯರ ಸಾಧನೆ ಪುಟಕ್ಕಿಟ್ಟ ಚಿನ್ನದಂತಾದ್ದು. ಅಯ್ಯಂಗಾರ್ಯರು ತಮ್ಮ ಹನ್ನೊಂದನೇ ವಯಸ್ಸಿನಲ್ಲೇ ಹಿರಿಯ ವಿದ್ವಾಂಸರಾದ ಪಾಪಾವೆಂಕಟರಾಮಯ್ಯ ಹಾಗೂ ತಂಜಾವೂರು ವೈದ್ಯನಾಥ ಅಯ್ಯರ್ ಅವರ ವಾದನಾಶೀರ್ವಾದದೊಡನೆ ತಿರುವಯ್ಯಾರಿನಲ್ಲಿ ಸೊಗಸಾಗಿ 1 ಗಂಟೆಗಳ ಕಾಲ ಸಂಗೀತ ಕಛೇರಿಯನ್ನು ನಿರ್ವಹಿಸಿದರು. ಅಂತೆಯೇ ತಮ್ಮ 17ನೇ ವಯಸ್ಸಿನಲ್ಲೇ ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾದರು. ಮೈಸೂರು ವಿದ್ವತ್‍ಗೋಷ್ಠಿಯೊಡನೆ ಭಾಗವಹಿಸಿ ಬೆಳಗಾಂನಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಹಾಡಿ ಮಹಾತ್ಮ ಗಾಂಧಿಯವರಿಂದ ಮೆಚ್ಚುಗೆ ಪಡೆದರು. 

ಪರಂಪರೆಯ ಭದ್ರಬುನಾದಿಗೆ ಬಹಳ ಗೌರವವಿತ್ತಿದ್ದರು. ಸಂಪ್ರದಾಯಕ್ಕೆ ವಿರುದ್ಧವಾಗಿ ಏನೇ ಅಪಚಾರಗಳು ಕಂಡರೂ ನಿಷ್ಠುರವಾಗಿ ಅದನ್ನು ಖಂಡಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ತಾವು ತಮ್ಮ ಹಿರಿಯರ ಸಂಗೀತದಲ್ಲಿ ಕಂಡುಂಡ ಸುಂದರ, ವಿಶೇಷ ಗುಣಗಳನ್ನು ತಮ್ಮ ಸಂಗೀತದಲ್ಲಿ ಮೈಗೂಡಿಸಿಕೊಂಡಿದ್ದರು. ಮನೋಧರ್ಮ ಅಥವಾ ಕಲ್ಪಿತ ಸಂಗೀತದ ಒಂದು ಭಾಗವಾದ ತಾನ ನೀರೂಪಣೆಯಲ್ಲಿ ಒಂದು ಆಳವಾದ ಪರಿಶ್ರಮ ಪಡೆದಿದ್ದರು. ನಾಭಿ ತಾನ ಮೊದಲಾದ ವಿವಿಧ ರೀತಿಯನ್ನು ತಮ್ಮ ಕಂಚಿನ ಕಂಠದಿಂದ ಅನೇಕ ವಿದ್ವತ್ ಸಭೆಗಳಲ್ಲಿ ಮನೋಜ್ಞವಾಗಿ ನಿರೂಪಿಸಿ ಸಮರ್ಥ ಪ್ರಾಚಾರ್ಯರೆಂಬ ಖ್ಯಾತಿ ಪಡೆದಿದ್ದರು. ತಿರುವಾಂಕೂರ್ ಸಂಸ್ಥಾನದಲ್ಲಿ ವಿಶೇಷವಾಗಿ ತಾನ ನಿರೂಪಣೆಗೆ ಲಯ ವಾದ್ಯ ಬಳಸುವ ಸಂಪ್ರದಾಯವಿದೆಯಾದರೂ “ತಾನಕ್ಕೆ ತಾಳ/ಲಯ ವಾದ್ಯ ಸಹಕಾರ ಅಪೇಕ್ಷಿಸದಲ್ಲಿ ಮನೋಧರ್ಮಕ್ಕೆ ಧಕ್ಕೆ" ಎಂಬುದೇ ಇವರ ಅಭಿಮತ. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ತಾನದ ಬಗ್ಗೆ ಪ್ರಾತ್ಯಕ್ಷಿಗಳನ್ನು ನೀಡಿ ಕಲಾವಿದರಿಗೂ, ವಿದ್ಯಾರ್ಥಿಗಳಿಗೂ ಮಾರ್ಗದರ್ಶಕರಾಗಿದ್ದಾರೆ. ಅಪರೂಪ ಕೃತಿಗಳ ವಿಶೇಷ ಕಾರ್ಯಕ್ರಮಗಳನ್ನು ಆಕಾಶವಾಣಿಯಲ್ಲಿ ಪ್ರಸ್ತುತ ಪಡಿಸಿದ್ದು ಕೆಲವು ಸ್ವಂತ ಕೃತಿಗಳನ್ನು ರಚಿಸಿದ್ದಾರೆ. ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ತಜ್ಞರ ಸಮಿತಿ ಸದಸ್ಯರಾಗಿ ಅನೇಕಕಾಲ ತಮ್ಮ ಸೇವೆ ಸಲ್ಲಿಸಿದ್ದಾರೆ. 

ಉತ್ತಮ ಶಿಕ್ಷಣ ಹೊಂದಿದ ಕಲೋಪಾಸಕ ಸತತ ಸಾಧನೆಯಿಂದ ತನ್ನ ಕಲೆಯನ್ನು ಸಂಸ್ಕರಿಸಿಕೊಳ್ಳಬೇಕು. ಗಾಯಕರು ಕೃತಿಯ ಸಾಹಿತ್ಯವನ್ನು ಚೆನ್ನಾಗಿ ಅರ್ಥೈಸಿಕೊಂಡು, ಅರ್ಥಕ್ಕೆ ಲೋಪವಿಲ್ಲದಂತೆ ಪದಚ್ಛೇದ ಮಾಡಿ, ಭಕ್ತಿಯೊಂದಿಗೆ ನಿರೂಪಿಸಬೇಕು. ವಾಗ್ಗೇಯಕಾರರ ಭಾವವನ್ನು ಕೃತಿಯಲ್ಲಿ ಅಭ್ಯಸಿಸಿ, ರಾಗದ ಚಿತ್ರಣ ಬಿಡಿಸಬೇಕು. ಕೃತಿಯ ನಿರೂಪಣೆಯಲ್ಲಿ ರಾಗಭಾವಗಳ ಕುಂದಿಲ್ಲದೆ ಸುಗಮವಾಗಿರಬೇಕು. “ಎಲ್ಲಿಯೇ ಆಗಲಿ ಕಲೆಯ ಉತ್ತಮಾಂಶÀಗಳು ಗೋಚರವಾದರೆ, ಅಹಂಕಾರವಿಲ್ಲದೆ ಅದನ್ನು ಮೆಚ್ಚಿ ಗೌರವಿಸಬೇಕು” ಎಂಬುದು ಅಯ್ಯಂಗಾರ್ಯರ ನಿಲುವು. 

ಇಂತಹ ಸದ್ಭಾವನೆ, ಅಭಿಪ್ರಾಯಗಳನ್ನು ಹೊಂದಿದ್ದ ಅಯ್ಯಂಗಾರ್ಯರು ಸಾಧನೆ, ಸೌಜನ್ಯ, ಸತ್ಸಂಪ್ರದಾಯ ಮೊದಲಾದ ಸದ್ಗುಣಗಳಿಂದ ಅತ್ಯುತ್ತಮ ಕಲಾವಿದರೆಂದು ಪ್ರಖ್ಯಾತಿ ಪಡೆದಿದ್ದರು. ತೊಂಬತ್ತು ವರ್ಷ ದಾಟಿದ ಇಳಿವಯಸ್ಸಿನಲ್ಲೂ ಸತತವಾಗಿ 4-5 ಗಂಟೆಗಳ ಕಾಲ ಸತತವಾಗಿ ವಿದ್ವತ್ಪೂರ್ಣ ಕಛೇರಿಗಳನ್ನು ಪ್ರಾತ್ಯಕ್ಷಿಕೆಗಳನ್ನು ನೀಡುವ ಸಾಮಥ್ರ್ಯವನ್ನು ಕಾಪಾಡಿಕೊಂಡಿದ್ದರು. ದೇಶಾದ್ಯಂತ ಅಪಾರ ಸಂಖ್ಯೆಯಲ್ಲಿ ಕಛೇರಿಗಳನ್ನು, ಉಪನ್ಯಾಸಗಳನ್ನೂ ನೀಡಿದ್ದಾರೆ. ಅಯ್ಯಂಗಾರ್ಯರು ತ್ಯಾಗರಾಜ ಸಂಗೀತ ವಿದ್ವತ್ ಸಭೆಯ ಅಧ್ಯಕ್ಷರು ವ್ಯವಸ್ಥಾಪಕರೂ ಆಗಿದ್ದರಲ್ಲದೆ ದಕ್ಷತೆಯಿಂದ ಅದನ್ನು ಬೆಳೆಸಿ ಬೆಳ್ಳಿಹಬ್ಬವನ್ನು ವಿಜೃಂಭಣೆಯಿಂದ 1966ರಲ್ಲಿ ಆಚರಿಸಿದರು. ಗಾಯನ ಮಾತ್ರವಲ್ಲದೆ ವಾದಕರಾಗಿ ವೀಣೆ, ಜಲತರಂಗ್, ಹಾರ್ಮೋನಿಯಂ ಹಾಗೂ ವಿದೇಶಿ ವಾದ್ಯವಾದ 'ದಲಜಿತ್‍ನಲ್ಲಿ ಪರಿಣತಿ ಪಡೆದಿದ್ದರು.

ಇವರ ದಕ್ಷ ಶಿಕ್ಷಣದಡಿ ತಯಾರಾದ ಶಿಷ್ಯರು ಅನೇಕಾನೇಕರು. ಡಾ. ಪದ್ಮಾಮೂರ್ತಿ, ಡಾ. ವೇದವಲ್ಲಿ, ರುಕ್ಮಿಣಿಯಮ್ಮ ಮತ್ತು ಸಹೋದರಿಯರು, ರಾಜಲಕ್ಷ್ಮಿಯವರು ಗಾಯನದಲ್ಲಿ, ಎಂ.ಎಸ್, ಜಯಮ್ಮ (ವೀಣೆ), ಮೊದಲಾದವರು. ಕಲಿಕೆಯ ವೇಳೆಯಲ್ಲಿ ಒಬ್ಬರೇ ಗುರುವಿನ ಹತ್ತಿರ ಶಿಕ್ಷಣವಾದರೆ 'ಗುರುವಿನ ಬಾನಿಯ ಪೂರ್ಣ ಪರಿಚಯಕ್ಕೆ ಅನುಕೂಲವೆಂಬುದು ಇವರ ಅಭಿಮತವಾದರೂ, ಸಾಮೂಹಿಕ ಶಿಕ್ಷಣ ರೀತಿ ನೀತಿಯಲ್ಲಿ ಶಾಲಾ ಕಾಲೇಜುಗಳಲ್ಲಿ ಸಂಗೀತವನ್ನು ಕಲಿಸಿ, ಉತ್ತಮ ಸಂಗೀತಾಂಶವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ವ ಎಲ್ಲ ವಿಧಿ ವಿಧಾನಗಳ ಬಗ್ಗೆ ಅಪಾರ ಆಸಕ್ತಿ ಸದÀಭಿಲಾಷೆಯನ್ನು ಹೊಂದಿದ್ದರು. ಇದಕ್ಕೆ ಅವರು ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆಸಲ್ಲಿಸಿರುವುದನ್ನು ಹಾಗೂ ಕರ್ನಾಟಕ ಸರ್ಕಾರ ನಡೆಸುವ ವಿಶೇಷ ಸಂಗೀತ ಪರಿಕ್ಷೆಗಳಿಗೆ ಪರೀಕ್ಷಕರಾಗಿ ಸಲ್ಲಿಸಿರುವ ಸೇವೆಯನ್ನು ಗಮನಿಸಬಹುದು. 
ಹಿರಿಯರ ವಿದ್ವತ್ ಬಗ್ಗೆ ಗೌರವ, ಭಕ್ತಿ  ಹೊಂದಿದ್ದಂತೆ, ಯುವ ಕಲಾವಿದರ ಕಲೆಯ ಬೇಳವಣಿಗೆಗೆ ಅತ್ಯಂತವಾಗಿ ಪ್ರೋತ್ಸಾಹಿಸುತ್ತಿದ್ದರು. ಯುವ ಕಲಾವಿದ ಪ್ರಶಾಂತರ ಗಾಯನಕ್ಕೆ ಮನಸೋತು ತುಂಬು ಹೃದಯದಿಂದ ಹತ್ತಾರು ಕಿವಿ ಮಾತುಗಳಿಂದ ಪ್ರೋತ್ಸಾಹಿಸಿ, ತಾವು ಬಳಸುತ್ತಿದ್ದ ತಂಬೂರಿಯನ್ನು ಆಶೀರ್ವಾದ ಪೂರ್ವಕವಾಗಿ ನೀಡಿ 'ತಾನ ಮೊದಲಾದ ವಿದ್ವತ್ ಪೂರ್ಣಭಾಗಗಳ ಬಗ್ಗೆ ಆಳವಾಗಿ ಪರಿಚಯವಿತ್ತು ಹರಸಿದ ಹೃದಯವಂತ ತಿಟ್ಟೆ. ಯಾರನ್ನೂ ಯಾರಲ್ಲೂ ಏನನ್ನೂ ಯಾಚಿಸದ ವ್ಯಕ್ತಿತ್ವ. ಇವರ ಕಲಾ ಫ್ರೌಢಿಮೆಗೆ, ಸಾಧನೆಯ ಕಂಪಿಗೆ ಬೆರಗಾಗಿ ಇವರನ್ನು ಅರಸಿಬಂದ ಪ್ರಶಸ್ತಿಗಳು ಸನ್ಮಾನಗಳು ಅನೇಕ.

ಜಯಚಾಮರಾಜ ಒಡೆಯರಿಂದ 'ಗಾನವಿಶಾರದ - (1946), ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರ - (1965), ಮೈಸೂರಿನ ಪ್ರಸನ್ನ ಸೀತಾರಾಮ ಮಂದಿರದ ಎಂಟನೇ ಸಂಗೀತ ಸಮ್ಮೇಳನ ಅಧ್ಯಕ್ಷರಾಗಿ "ಗಾನ ಕಲಾಸಿಂಧು" ಬಿರುದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ - (1972), ಕೇಂದ್ರ ಸಂಗೀತ ಕರ್ನಾಟಕ ಅಕಾಡೆಮಿ ಪ್ರಶಸ್ತಿ - (1989) ಮತ್ತು ಕನಕ ಪುರಂದರ ಪ್ರಶಸ್ತಿ - (1991) ಮತ್ತು ಬೆಂಗಳೂರು ಗಾಯನ ಸಮಾಜದ "ಸಂಗೀತ ಕಾಲಾರತ್ನ" ಮೊದಲಾದವುಗಳು.

ತಾಯ್ನಾಡಿನ ಮೇಲೆ, ತಾವು ನೀಡುತ್ತಿದ್ದ ಕಛೇರಿಗಳ ಸಭಾಮರ್ಯಾದೆ ಸತ್ಸಂಪ್ರದಾಯಗಳ ಬಗ್ಗೆ ಕಲೆಯಲ್ಲಿ ಪರಂಪರೆಯ ಹಿರಿಮೆಯಲ್ಲಿ ಉಳಿಸಿ -ಬೆಳೆಸುವ ಬಗ್ಗೆ ಇದ್ದ ಅತ್ಯಂತ ಕಾಳಜಿ ಹೊಂದಿದ್ದ ನಾಡಿನ ಹಿರಿಯ ಕಲಾಜ್ಯೋತಿ ತಿಟ್ಟೆ ಕೃಷ್ಣ ಅಯ್ಯಂಗಾರ್ಯರು 95 ವರುಷಗಳ ತುಂಬು ಜೀವನದಲ್ಲಿ ವೈಯಕ್ತಿಕ ನೋವು ನಲಿವುಗಳಿಗಿಂತ ಕಲಾರಾಧನೆಗೇ ಅನವರತ ಚಿಂತನೆ ನಡೆಸುತ್ತಿದ್ದರು. 16ನೇ ಮಾರ್ಚ್ 1997ರಂದು ತಮ್ಮ ಜನ್ಮ ಸ್ಥಳವಾದ ಮೈಸೂರಿನಲ್ಲೇ ಕಲಾಪ್ರಪಂಚಕ್ಕೆ ವಿದಾಯ ಹೇಳಿದರು. 										(ಪದ್ಮ ಗುರುದತ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ